Haggai 2

ನೂತನ ದೇವಾಲಯದ ವೈಭವ

1ಏಳನೆಯ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ಕೊಟ್ಟು, 2<<ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ನೆರೆದಿದ್ದ ಜನರನ್ನು ಕೂಡಿಸಿ,


3<ಈ ಆಲಯದ ಪೂರ್ವ ವೈಭವವನ್ನು ನೋಡಿದವರು,

ನಿಮ್ಮಲ್ಲಿ ಎಷ್ಟು ಮಂದಿ ಉಳಿದಿದ್ದೀರಿ?
ಇದರ ಈಗಿನ ಸ್ಥಿತಿಯು ನಿಮಗೆ ಹೇಗೆ ತೋರುತ್ತದೆ?
ನಿಮ್ಮ ದೃಷ್ಟಿಗೆ ಏನೂ ಇಲ್ಲವಾಗಿ ತೋರುತ್ತಿದೆಯೇಲ್ಲವೇ?>
4ಯೆಹೋವನು ಇಂತೆನ್ನುತ್ತಾನೆ, <ಜೆರುಬ್ಬಾಬೆಲನೇ ಈಗ ಧೈರ್ಯವಾಗಿರು;
ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವನೇ, ಧೈರ್ಯವಾಗಿರು;
ದೇಶೀಯರೇ, ನೀವೆಲ್ಲರೂ ಧೈರ್ಯಗೊಂಡು ಕೆಲಸನಡಿಸಿರಿ> ಇದು ಯೆಹೋವನ ನುಡಿ; <ನಾನು ನಿಮ್ಮೊಂದಿಗೆ ಇದ್ದೇನೆ> ಎಂದು ಸೇನಾಧೀಶ್ವರ ಯೆಹೋವನು ನುಡಿಯುತ್ತಾನೆ.
5<ನೀವು ಐಗುಪ್ತದಿಂದ ಪಾರಾಗಿ ಬಂದಾಗ, ನಾನು ನಿಮಗೆ ವಾಗ್ದಾನವಾಗಿ ಕೊಟ್ಟ ಮಾತನ್ನು ನೆರವೇರಿಸುದೆನು;
ನನ್ನ ಆತ್ಮನು ನಿಮ್ಮ ಮಧ್ಯದಲ್ಲಿ ನೆಲೆಗೊಂಡಿರುವನು; ಹೆದರಬೇಡಿರಿ.>

6ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <ಸ್ವಲ್ಪ ಕಾಲದ ಮೇಲೆ,

ನಾನು ಇನ್ನೊಂದೇ ಸಾರಿ ಆಕಾಶವನ್ನೂ, ಭೂಮಿಯನ್ನೂ, ಸಮುದ್ರವನ್ನೂ, ಒಣನೆಲವನ್ನೂ ಅದುರಿಸಿ ಸಕಲಜನಾಂಗಗಳನ್ನು ನಡುಗಿಸುವೆನು;
7ಆಗ ಸಮಸ್ತ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು,
ಈ ಆಲಯವನ್ನು ವೈಭವದಿಂದ ತುಂಬಿಸುವೆನು> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

8<ಬೆಳ್ಳಿಯೆಲ್ಲಾ ನನ್ನದು, ಬಂಗಾರವೆಲ್ಲಾ ನನ್ನದು> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

9<ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವವಕ್ಕಿಂತ ವಿಶೇಷವಾಗಿರುವುದು> ಇದು ಸೇನಾಧೀಶ್ವರನಾದ ಯೆಹೋವನ ನುಡಿ.
<ಈ ಸ್ಥಳದಲ್ಲಿ ಸಮಾಧಾನವನ್ನು ಅನುಗ್ರಹಿಸುವೆನು> >> ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಜನರ ದೋಷವೇ ದುರ್ಭಿಕ್ಷಕ್ಕೆ ಕಾರಣ

10ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರುಷದ ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ದಯಪಾಲಿಸಿದನು. 11ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ನೀನು ಯಾಜಕರ ಹತ್ತಿರ ಹೋಗಿ, 12ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಮೀಸಲಿನ ಮಾಂಸವನ್ನು ಇಟ್ಟುಕೊಂಡು ಬರುತ್ತಿರುವಾಗ ಆ ಸೆರಗು ರೊಟ್ಟಿಯನ್ನಾಗಲಿ ಇಲ್ಲವೆ ಗುಗ್ಗರಿಯನ್ನಾಗಲಿ ಅಥವಾ ದ್ರಾಕ್ಷಾರಸವನ್ನಾಗಲಿ ಇಲ್ಲವೆ ಎಣ್ಣೆಯನ್ನು ಅಥವಾ ಯಾವ ಆಹಾರ ಪದಾರ್ಥವನ್ನಾಗಲಿ ಸೋಕಿದರೆ ಅವು ಪರಿಶುದ್ಧವಾಗುವುದೋ? ಎಂದು ಧರ್ಮವಿಧಿಯನ್ನು ವಿಚಾರಿಸು>> ಪ್ರವಾದಿಯು ಹಾಗೆ ವಿಚಾರಿಸಲು ಯಾಜಕರು <<ಇಲ್ಲ>> ಎಂದು ಉತ್ತರಕೊಟ್ಟರು.

13ಆ ಮೇಲೆ ಹಗ್ಗಾಯನು, <<ಹೆಣವನ್ನು ಮುಟ್ಟಿ ಅಶುದ್ಧನಾದವನು ಇವುಗಳಲ್ಲಿ ಯಾವುದನ್ನಾದರು ಸೋಕಿದರೆ ಅದು ಅಶುದ್ಧವಾಗುವುದೋ?>> ಎಂದು ಕೇಳಿದ್ದಕ್ಕೆ ಯಾಜಕರು, <<ಅಶುದ್ಧವೇ ಆಗುವುದು>> ಎಂದು ಉತ್ತರಕೊಟ್ಟರು. 14ಆಗ ಹಗ್ಗಾಯನು ಆ ಪ್ರಸ್ತಾಪವೆತ್ತಿ ಜನರಿಗೆ ಹೀಗೆಂದನು, <<ಯೆಹೋವನು ಇಂತೆನ್ನುತ್ತಾನೆ, ಅದರಂತೆ ಈ ಪ್ರಜೆಗಳು, ಅದರಂತೆ ಈ ಜನಾಂಗವು, ಅದರಂತೆಯೇ, ಇವರು ಕೈಹಾಕಿದ ಎಲ್ಲಾ ಕೆಲಸವು, ಅವರು ತರುವ ಕಾಣಿಕೆ, ನೈವೇದ್ಯ ಎಲ್ಲವೂ ನನಗೆ ಅಶುದ್ದವಾಗಿ ಕಾಣುತ್ತಿದ್ದೆ.

15<<ಯೆಹೋವನ ಆಲಯದ ನಿವೇಶನದಲ್ಲಿ ಕಲ್ಲಿನ ಮೇಲೆ ಕಲ್ಲಿಡುವ ಈ ಮೊದಲ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ; 16ಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಸೇರಿನ ರಾಶಿಗೆ ಬಂದಾಗ ಹತ್ತು ಸೇರು ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೇ; ಐವತ್ತು ಸೇರು ದ್ರಾಕ್ಷಾರಸವನ್ನು ಮೊಗೆಯಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಮಾತ್ರ ದೊರೆಯುತ್ತಿತ್ತು. 17ನಾನು ನಿಮ್ಮ ದುಡಿತದ ಫಲವನ್ನೆಲ್ಲಾ ಆನೆಕಲ್ಲು ಮಳೆಯಿಂದಲೂ, ಬಿಸಿಗಾಳಿಗೂ ಹಾಳುಮಾಡಿ ನಿಮ್ಮನ್ನು ಬಾಧಿಸಿದರೂ, ನೀವು ನನ್ನ ಕಡೆಗೆ ತಿರುಗಿಕೊಳ್ಳಲಿಲ್ಲ>> ಇದು ಯೆಹೋವನ ನುಡಿ.

18<<ಜ್ಞಾಪಕಮಾಡಿಕೊಳ್ಳಿರಿ, ಯೆಹೋವನ ಆಲಯಕ್ಕೆ ಅಸ್ತಿವಾರ ಹಾಕಿದ ಈ ದಿನದ ಹಿಂದಿನ ಕಾಲವನ್ನು, ಅಂದರೆ ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ಈ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ. 19ಕಣಜದಲ್ಲಿ ಕಾಳು ಇನ್ನು ಇದೆಯೋ? ದ್ರಾಕ್ಷೆ, ಅಂಜೂರ, ದಾಳಿಂಬೆ, ಒಲೀವ ಈ ಗಿಡಗಳು ಫಲಿಸಲಿಲ್ಲವಲ್ಲಾ . ಇದೇ ದಿನ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.>>

ದೇಶಾಧಿಪತಿಗೆ ಜೆರುಬ್ಬಾಬೇಲನಿಗೆ ನೀಡಿದ ವಾಗ್ದಾನ

20ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನು ಹಗ್ಗಾಯನಿಗೆ ಈ ಎರಡನೆಯ ವಾಕ್ಯವನ್ನು ದಯಪಾಲಿಸಿ, 21<<ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲನಿಗೆ ಹೀಗೆ ನುಡಿ, ನಾನು ಭೂಮ್ಯಾಕಾಶಗಳನ್ನು ಅದುರಿಸಿ,

22ರಾಜ್ಯಗಳ ಸಿಂಹಾಸನವನ್ನು ಕೆಡವಿ, ಜನಾಂಗಗಳ ಸಂಸ್ಥಾನಬಲವನ್ನು ಧ್ವಂಸಮಾಡಿ ರಥಗಳನ್ನೂ ಮತ್ತು ಅದರ ಸವಾರರನ್ನು ದೊಬ್ಬಿಬಿಡುವೆನು;
ಕುದುರೆಗಳೂ ಹಾಗೂ ರಾಹುತರೂ ಬಿದ್ದುಹೋಗುವರು, ಪ್ರತಿಯೊಬ್ಬನೂ ತನ್ನ ಕಡೆಯವನ ಕತ್ತಿಯಿಂದ ಹತನಾಗುವನು.>>

23ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, <<ಶೆಯಲ್ತೀಯೇಲನ ಮಗನೂ, ನನ್ನ ಸೇವಕನಾದ ಜೆರುಬ್ಬಾಬೆಲನೇ,

ಆ ದಿನದಲ್ಲಿ ನಾನು ನಿನ್ನನ್ನು ತೆಗೆದುಕೊಂಡು ಮುದ್ರೆಯುಂಗುರವನ್ನಾಗಿ ಮಾಡಿಕೊಳ್ಳುವೆನು,
ಇದಕ್ಕೇ ನಿನ್ನನ್ನು ಆರಿಸಿಕೊಂಡಿದ್ದೇನೆ>> ಇದು ಸೇನಾಧೀಶ್ವರ ಯೆಹೋವನ ನುಡಿ.
Copyright information for KanULB